Wednesday 19 March 2014

ಮೇಘ ಸಂದೇಶ

ಮೇಘ ಸಂದೇಶ

ಭೂಮಿಗೂ ಬಾನಿಗೂ ಇರುತಿಹುದು ಬಲುನಂಟು
ಗಂಡಹೆಂಡಿರಿಗಿರುವ ನಂಟಿನಂತೆ
ಆಗಸದ ಬಿಸಿಲಿಗೆ ಭೂಮಿ ತಾ ನೀಡುತಿರೆ
ನೀರಿನಾವಿಯ ಸತತ ಪ್ರೀತಿಯಂತೆ

ಪ್ರೀತಿಪ್ರೇಮಗಳ ಸವಿವಿನಿಮಯದ ಫಲವಾಗಿ
ಉದಿಸಿರಲು ಮೋಡಗಳು ಮಕ್ಕಳಂತೆ
ಕ್ಷಣ ಕ್ಷಣಕು ಬದಲು ಮಾಡುತಲಿ ರೂಪಗಳ
ಹೋಲುತಿರೆ ಬೆಳೆಯುತಿಹ ಶಿಶುಗಳಂತೆ

ಆಗಸದಿ ಓಡುತಲಿ,ಏಳುತಲಿ ಬೀಳುತಲಿ
ಮೋಡಗಳು ಆಡಿರಲು ಮಕ್ಕಳಂತೆ
ಮಳೆಯ ಹನಿಗಳ ಸುರಿಸಿ ಭುವಿಗೆ ತಂಪೆರೆಯುವವು
ಅಳುತ ಮುದವನು ನೀಳ್ವ ಕಂದರಂತೆ

ಬಾಲ್ಯದಾವಸ್ಠೆಯಲಿ ಮಕ್ಕಳಾಟವು ಮನಕೆ
ತಂಪನೆರೆದಿರೆ ಬೇಸಿಗೆ ಮಳೆಯ ತೆರದಿ
ಬೆಂಡಾದ ಬಾಳ ಬೆಂಗಾಡಿನಲಿ ಸಂತಸದ
ಚಿಗುರನೊಡೆಸುತ ಸೋಜಿಗವ ಮುದದಿ

ಕಳೆದಿರಲು ಬಾಲ್ಯವದು ಮುಗ್ಢತೆಯು ಮರೆಯಾಗಿ
ಮೂಡುತಿರೆ ಮನದಲ್ಲಿ ಸ್ವಾರ್ಥದುರಿಯು
ಆಸೆಗಳಬೆನ್ನೇರಿ ಸಾಗುತಿರೆ ಜೀವನದಿ ಬೇಕುಗಳ
ಹಗ್ಗವನು ಹೊಸೆದು ದಿನವೂ

ಜೀವನದಿ ಪಾತ್ರಗಳು ಬದಲಾಗಿ ಹೋಗುತಿರೆ
ತಂದೆ ತಾಯಿಗಳಾಗಿ ಭುವಿಯ ಜಲವು
ಮನಕೆ ಮುದವನು ನೀಳ್ವ ಮೋಡಗಳೆ ಇಲ್ಲದಿಹ
 ಬಿಸಿಲಿನಾಗಸವಾಗೆ ಮಕ್ಕಳಿರುವು

ಕಾಲಸರಿಯುತಲಿರಲು,ರೆಕ್ಕೆಗಳು ಬಲಿತಿರಲು
ಹಕ್ಕಿಗಳು ತಾವಾಗಿ ಹೊರಗೆ ಹಾರಿ
ಹೊಸ ಬಾಳು ಹೊಸಹಾದಿ ಬಯಸಿ ದೂರದಎಲೆಲ್ಲೋ
ಗೂಡು ಮಾಡಿರೆ ತಮ್ಮ ಜೊತೆಯ ಸೇರಿ

ಮೋಡಗಳು ಚೆದುರಿದಾ ಆಕಾಶದಂತಾಯ್ತು
ಗಂಡ ಹೆಂಡಿರುಗಳಾ ಮನೆಯು- ಮನವು
ಮೇಘಗಳ ಬರುವಿಕೆಗೆ ಇರುವಿಕೆಗೆ ಕಾದಿರುವ
ಧರೆಯಂತೆ ಪರಿತಪಿಸಿ ಅವರು ದಿನವೂ

ಮೇಘಗಳೆ ಬಾರದಿಹ ಹನಿಗಳೇ ಸುರಿಯದಿಹ
ಬಾಳಿನಲಿ ನೆನಪುಗಳೆ ಮೋಡವಾಗಿ
ಮಳೆನಿಂದ ಬಳಿಕವೂ ಮರದಿಂದ ತೊಟಿಯುತಿಹ
ಹನಿಯಂತೆ ತಂಪೆರೆದು ಗೂಢವಾಗಿ!!

ಡಾ.ಸುದರ್ಶನ ಗುರುರಾಜರಾವ್.


No comments:

Post a Comment