Wednesday 19 March 2014

ಮೇಘ ಸಂದೇಶ

ಮೇಘ ಸಂದೇಶ

ಭೂಮಿಗೂ ಬಾನಿಗೂ ಇರುತಿಹುದು ಬಲುನಂಟು
ಗಂಡಹೆಂಡಿರಿಗಿರುವ ನಂಟಿನಂತೆ
ಆಗಸದ ಬಿಸಿಲಿಗೆ ಭೂಮಿ ತಾ ನೀಡುತಿರೆ
ನೀರಿನಾವಿಯ ಸತತ ಪ್ರೀತಿಯಂತೆ

ಪ್ರೀತಿಪ್ರೇಮಗಳ ಸವಿವಿನಿಮಯದ ಫಲವಾಗಿ
ಉದಿಸಿರಲು ಮೋಡಗಳು ಮಕ್ಕಳಂತೆ
ಕ್ಷಣ ಕ್ಷಣಕು ಬದಲು ಮಾಡುತಲಿ ರೂಪಗಳ
ಹೋಲುತಿರೆ ಬೆಳೆಯುತಿಹ ಶಿಶುಗಳಂತೆ

ಆಗಸದಿ ಓಡುತಲಿ,ಏಳುತಲಿ ಬೀಳುತಲಿ
ಮೋಡಗಳು ಆಡಿರಲು ಮಕ್ಕಳಂತೆ
ಮಳೆಯ ಹನಿಗಳ ಸುರಿಸಿ ಭುವಿಗೆ ತಂಪೆರೆಯುವವು
ಅಳುತ ಮುದವನು ನೀಳ್ವ ಕಂದರಂತೆ

ಬಾಲ್ಯದಾವಸ್ಠೆಯಲಿ ಮಕ್ಕಳಾಟವು ಮನಕೆ
ತಂಪನೆರೆದಿರೆ ಬೇಸಿಗೆ ಮಳೆಯ ತೆರದಿ
ಬೆಂಡಾದ ಬಾಳ ಬೆಂಗಾಡಿನಲಿ ಸಂತಸದ
ಚಿಗುರನೊಡೆಸುತ ಸೋಜಿಗವ ಮುದದಿ

ಕಳೆದಿರಲು ಬಾಲ್ಯವದು ಮುಗ್ಢತೆಯು ಮರೆಯಾಗಿ
ಮೂಡುತಿರೆ ಮನದಲ್ಲಿ ಸ್ವಾರ್ಥದುರಿಯು
ಆಸೆಗಳಬೆನ್ನೇರಿ ಸಾಗುತಿರೆ ಜೀವನದಿ ಬೇಕುಗಳ
ಹಗ್ಗವನು ಹೊಸೆದು ದಿನವೂ

ಜೀವನದಿ ಪಾತ್ರಗಳು ಬದಲಾಗಿ ಹೋಗುತಿರೆ
ತಂದೆ ತಾಯಿಗಳಾಗಿ ಭುವಿಯ ಜಲವು
ಮನಕೆ ಮುದವನು ನೀಳ್ವ ಮೋಡಗಳೆ ಇಲ್ಲದಿಹ
 ಬಿಸಿಲಿನಾಗಸವಾಗೆ ಮಕ್ಕಳಿರುವು

ಕಾಲಸರಿಯುತಲಿರಲು,ರೆಕ್ಕೆಗಳು ಬಲಿತಿರಲು
ಹಕ್ಕಿಗಳು ತಾವಾಗಿ ಹೊರಗೆ ಹಾರಿ
ಹೊಸ ಬಾಳು ಹೊಸಹಾದಿ ಬಯಸಿ ದೂರದಎಲೆಲ್ಲೋ
ಗೂಡು ಮಾಡಿರೆ ತಮ್ಮ ಜೊತೆಯ ಸೇರಿ

ಮೋಡಗಳು ಚೆದುರಿದಾ ಆಕಾಶದಂತಾಯ್ತು
ಗಂಡ ಹೆಂಡಿರುಗಳಾ ಮನೆಯು- ಮನವು
ಮೇಘಗಳ ಬರುವಿಕೆಗೆ ಇರುವಿಕೆಗೆ ಕಾದಿರುವ
ಧರೆಯಂತೆ ಪರಿತಪಿಸಿ ಅವರು ದಿನವೂ

ಮೇಘಗಳೆ ಬಾರದಿಹ ಹನಿಗಳೇ ಸುರಿಯದಿಹ
ಬಾಳಿನಲಿ ನೆನಪುಗಳೆ ಮೋಡವಾಗಿ
ಮಳೆನಿಂದ ಬಳಿಕವೂ ಮರದಿಂದ ತೊಟಿಯುತಿಹ
ಹನಿಯಂತೆ ತಂಪೆರೆದು ಗೂಢವಾಗಿ!!

ಡಾ.ಸುದರ್ಶನ ಗುರುರಾಜರಾವ್.


ಹುಡುಗ ಮತ್ತು ಮರ

ಹುಡುಗ ಮತ್ತು ಮರ

ಬೆಟ್ಟದಾ ತಪ್ಪಲಲಿ ಸುಂದರ ಬಯಲೊಂದು
ಬಯಲ ಮಧ್ಯದಲಿತ್ತು ಒಂದು ಮರವು
ಕೂಗಳತೆ ದೂರದಲಿ ಪುಟ್ಟದೊಂದು ಮನೆಯು
ಮನೆಯ ಕಣ್ಮಣಿಯಾಗಿ ಗಂಡು ಮಗುವು

ತಂದೆ ತಾಯಿಯರೆಂದು ಹೊಲದಲ್ಲಿ ದುಡಿದಿರಲು
ದುಡಿಯುವಾ ಸಮಯದಲಿ ಪುಟ್ಟ ಮಗುವು
ಮರದ ಬಳಿಯಲಿ ಬಂದು ಆಟವಾಡುತಲಿರಲು
ಆಟ ಪಾಠವ ಕಂಡು ನಲಿದು ಮರವು

ತನ್ನ ಮೌನವ ಮುರಿದು ಮಾತುಗಳನಾಡುತಲಿ
ಮಾತು ಬಾರದ ಕಂದಗದನು ಕಲಿಸಿ
ಹಸಿವಿಂದ ಮಗುವೆಂದು ಬಳಲಿದರೆ ಅದ ಕಂಡು
ಬಳಲಿಕೆಯ ಮರೆಸುಸುವುದು ಹಣ್ಣ ತಿನಿಸಿ

ದಿನಮಾಸ ಉರುಳಿರಲು ಮಗುವು ತಾ ಬೆಳೆದಿರಲು
ಬೆಳೆವ ಮಗುವನು ಕಂಡು ಮರವು ನಲಿದು
ಮಗುವಿಗೀಯುತ ನೆರಳು ಹಣ್ಣು ಬಲು ರುಚಿಯಿರಲು
ಬೆಳೆಸಿತ್ತು ತನ್ನೆದೆಯ ಸಾರ ಬಸಿದು

ಬೆಳೆದ ಬಾಲಕನಾಗಿ ಮರದ ಬಳಿ ಬಂದೊಂದು
ದಿನ ಮುಖವ ಬಾಡಿಸುತ ಕುಳಿತು ಕೊಳಲು
ದುಗುಡ ತಾಳಿದ ಮರವು ಬಾಲಕನ ಬೇಸರಕೆ
ಕಾರಣವು ಏನೆಂದು ತಾ ಕೇಳಲು

ಹಣ್ಣುಗಳು ಸಾಕಾಯ್ತು ತಿಂದು ಬೇಸರವಾಯ್ತು
ಬರಿಮಾತು ನಿನ್ನೊಡನೆ ದಿನವೆಲ್ಲವೂ
ದಿನ ದಿನಕು ಹೊಸ ಆಟ ಪಾಠಗಳು ಬೇಕೆಂದು
ಪರಿತಪಿಸಿ ಕಾಡುತಿದೆ ನನ್ನ ಮನವು

ಬಾಲಕನ ಅಭಿಲಾಷೆಯನ್ನು ಮರ ಅರಿಯುತಲಿ
ಅರಿಕೆ ಮಾಡಿತು ಅವಗೆ ಪ್ರೀತಿಯಿಂದ
ನನ್ನ ಕೊಂಬೆಗೆ ಗಟ್ಟಿ ಹಗ್ಗವನು ನೀ ಕಟ್ಟಿ
ಆಡುತಿರು ಉಯ್ಯಾಲೆ ಹರುಷದಿಂದ

ಮರದ ತ್ಯಾಗದ ಅರಿವಿ ಇಲ್ಲದೆಯೆ ಬಾಲಕನು
ಸುಖಕಾಗಿ ವೃಕ್ಷದಾ ತೋಳನ್ನು ಬಳಸಿ
ಉಯ್ಯಾಲೆಯಲಿ ಕುಳಿತು ಆಡಿದನು ತೂಗಿದನು
ದೇಹ ಮನಸುಗಳನ್ನು ಏರಿಸುತ ಇಳಿಸಿ

ರೆಂಬೆ ಕೊಂಬೆಗಳೆಲ್ಲ ಜಗ್ಗಿ  ಮೈ ನೋವಾಗಿ
ನಲುಗಿತದು ಮರ ತಾನು ದಿನರಾತ್ರಿಯು
ಮರದ ಪರಿವೆಯೆ ಇರದ ಬಾಲಕನು ಅನುದಿನವು
ಆಡುತಲಿ ನಲಿದಿದ್ದ ಪ್ರತಿಬಾರಿಯು

ಋತು ಚಕ್ರಗಳು ಉರುಳಿ ಕುಡಿ ಮೀಸೆಯದು ಚಿಗುರಿ
ಬಾಲಕನು ಬೆಳೆದಾದ ನವತರುಣನು
ಆಟ ಪಾಠಗಳವಗೆ ರುಚಿಸದಿರೆ ಮರದೊಡನೆ
ಆಗ್ರಹದಿ ಹಣಕಾಗಿ ಕೇಳುತಿಹನು

ನನ್ನ ಬಳಿ ಬಹಳಿರುವ ಹಣ್ಣುಗಳ ನೀ ಕೊಯ್ದು
ಪಟ್ಟಣಕೆ ಕೊಂಡೊಯ್ದು ವಿಕ್ರಯಿಸಲು
ಸಿಗಬಹುದು ಬಹಳ ಹಣ ನೀ ಒಂದು ಕೈ ನೋಡು
ಎಂದು ಆ ಮರಹೇಳಿ ಸಂಭ್ರಮಿಸಲು

ಹಣ್ಣುಗಳ ಕೊಯ್ಯುತಲಿ ಯುವಕ ತಾ ತವಕದಲಿ
ಕೊಂಡೊಯ್ದ ಪಟ್ಟಣಕೆ ಮಾರಿ ಬರಲು
ಹಣಗಳಿಸಿ ಮರಳಿದನು ಸಿಹಿತಿನಿಸು ತಿನ್ನುತಲಿ
ಮರಕೇನು ಬೇಕೆಂದು ಕೇಳದಿರಲು

ತನಗೇನು ಬೇಕಿಲ್ಲ ಭೂ ತಾಯಿ ಪೊರೆದಿಹಳು
ನೀನು ಸಂತಸ ಪಡಲು ನನಗೆ ಸಾಕು
ಗೆಳೆಯನಾ ಸುಖವೆನ್ನ ಸುಖದಂತೆ ಸಂಭ್ರಮಿಸಿ
ಮರಗಳಿಸಿ ಪುಣ್ಯವನು ಇಹಕು ಪರಕು

ಯುವಕಗಾಯಿತು ಮದುವೆ ಮುಂದೆ ಮಕ್ಕಳುಗಳು
ಸಂಸಾರ ಬೆಳೆದಿತ್ತು ದೊಡ್ಡದಾಗಿ
ಮನೆ ಚಿಕ್ಕದೆನಿಸಿರಲು ವಿಸ್ತರಿಸೆ ಮನೆಯನ್ನು
ಕೇಳಿದನು ಮರದ ಬಳಿ ಹಲಗೆಗಾಗಿ

ಕೆಳಗಿನಾ ಕೊಂಬೆಗಳು ಅಗಲ ಇರುವವು ಬಹಳ
ನೀ ಕಡಿಯೆ ಸಿಗುವವು ಬಹಳ ಹಲಗೆ
ಮನೆ ದೊಡ್ಡದಾದಂತೆ ಮನಸು ಮುದುಡುವುದೆಂಬ
ಮಾತನ್ನು ಮರೆಯಬೇಡೆಂದು ಕೊನೆಗೆ

ವಾರ ಮಾಸಗಳಾಗಿ ಯುವಕನಾ ಕುರುಹಿರದೆ
ಒಂದು ದಿನ ಕುಳಿತನವ ಮರದೆಡೆಗೆ ಬಂದು
ಜೋಲು ಮೋರೆಯ ಕಂಡು ಮರವು ತಾ ಬಲು ನೊಂದು
ಕೇಳಿರಲು ಅವನ ಕ್ಲೇಶವದೇನೆಂದು

ಖರ್ಚು ಬೆಳೆಯುತಲಿಹುದು ನಿನ್ನ ಹಣ್ಣುಗಳಿಂದ
ನೀಸದಾಗದು ನನ್ನ ಸಂಸಾರವನ್ನು
ಕೊಡು ನಿನ್ನ ಬೊಡ್ಡೆಯನು ನಾ ಕಟ್ಟಿ ಹಡಗನ್ನು
ದುಡಿಯುತಲಿ ಮಾಡುವೆನು ವ್ಯಾಪಾರವನ್ನು

ಇಷ್ಟು ಮಾಡಿದ ನಾನು ಅಷ್ಟನ್ನೂ ಮಾಡದಿರೆ
ನಮ್ಮ ಸ್ನೇಹಕೆ ಇರುವ ಅರ್ಥವೇನು
ಕಡಿದು ನೀ ನನ್ನನ್ನು ಕಟ್ಟು ಕನಸಿನ ಹಡಗು
ದುಡಿದು ನೀ ಅನುಭವಿಸು ಸಿರಿತನವನು

ವರ್ಷಗಳು ಉರುಳಿದವು ಯುವಕ ಮರಳಿದ
ಮನೆಗೆ ಗಳಿಸುತ್ತ ಅಪಾರ ಧನರಾಶಿಯ
ಸಂಸಾರದೊಡಗೂಡಿ ಅನುಭವಿಸಿ ಸಿರಿತನವ
ಮರೆತಿರಲು ತ್ಯಾಗಮಯಿ ಮರದ ಇರುವ

ವೃಧ್ಧಾಪ್ಯ ಆವರಿಸಿ ದೇಹ ತಾ ಹಣ್ಣಾಗಿ
ಹೆಂಡತಿಯು ತ್ಯಜಿಸಿರಲು ಇಹಲೋಕವ
ಮಕ್ಕಳೆಲ್ಲರು ತಮ್ಮ ವ್ಯವಹಾರದಲಿ ಮುಳುಗಿ
ಕೆಡೆಗಣಿಸಿರಲು ಈ ಮುದುಕನಿರುವ

ಒಂಟಿತನವದು ಕಾಡಿ ಮನಸು ಮುದುಡುತಲಿರಲು
ಆಗಾಯ್ತು ಅವನಿಗಾ ಮರದ ನೆನಪು
ಮನದಲ್ಲಿ ಬೆಳಕೊಂದು ಹೊಳೆದಂತೆ ನಡೆದಿರಲು
ಹೆಜ್ಜೆಗಳಿಗಂದಿತ್ತು ಹೊಸದೆ ಹುರುಪು

ಕತ್ತರೈಸಿದಾ ಬೊಡ್ಡೆ ಹಾಗೆಯೇ ಉಳಿದಿತ್ತು
ಕುಳಿತುಕೊಳ್ಳಲು ಕಲ್ಲು ಹಾಸಿನಂತೆ
ಮುದುಕನನು ಕಂಡಾಗ ನಸು ನಗುತ
ಸ್ವಾಗತಿಸಿ ಹೇಳಿತ್ತು ತನಮೇಲೆ ಕುಳ್ಳುವಂತೆ

ಕೊಡುವುದನು ಕಲಿಯದಲೆ ಬರಿದೆ ಕೇಳುತ ತನ್ನ
ಜೀವನವನ್ನೆಲ್ಲ ಬಸಿದ ಮುದುಕ
ಒಂದು ಘಳಿಗೆಯು ತನ್ನ ಮನದಲ್ಲಿ ಸಂತೋಷ
ಅನುಭವಿಸದೆಯೆ ಕಳೆದ ತನ್ನ ಬದುಕ

ಪರರ ಬೇಡಿಕೆಗಳಿಗೆಂದು ಸ್ಪಂದಿಸುತ ತನ್ನ
ತಾನೇ ಅವಗೆ ಧಾರೆ ಎರೆದು
ಮರತಾನು ಬದುಕಿತ್ತು ಬೊಡ್ಡೆಯಾ ಸ್ಥಿತಿಯಲ್ಲಿ
ಜಗದೆಲ್ಲ ಸಂತೋಷ ಸೂರೆ ಹೊಡೆದು.!!

ಡಾ. ಸುದರ್ಶನ ಗುರುರಾಜರಾವ್





ಅಂತರಾಗ್ನಿ

ಅಂತರಾಗ್ನಿ


ಸಾಧನೆಯ ಅಂತರಾಗ್ನಿಯದು
ಬೇಕೆಂದು ಬದುಕಿಗೆ
ಸಾಧನೆಯೆ ಇಲ್ಲದಿಹುದೆಂಥ ಬದುಕು
ಸುತ್ತಲಿನ ಪರಿಸರದಿ ಸ್ಫೂರ್ತಿಯನು
ಪಡೆಯುತಲಿ ನೀ ಶ್ರಮಿಸು
ಪರಿಹರಿಸೆ ಅದರ ಹುಳುಕು

ಅದಿಕವಿ ಪಂಪ ತಾ ಭಾರತವ
ಬರೆದಾಗ ಕನ್ನಡದಿ
ಭಾರತದ ಕಾವ್ಯವಿರಲಿಲ್ಲ
ಸ್ಫೂರ್ತಿಯನು ತಾ ಪಡೆದು
ರಚಿಸಿರಲು ಕಾವ್ಯವನು
ಅದಿಕವಿ ತಾನಾಗಿ ಮೆರೆಯದಿರಲಿಲ್ಲ

ಪಂಪನಾ ಕಾವ್ಯವದು ಒರತೆಯಾಗುತ
ಹರಿದು ಮುಂದೆಲ್ಲ
ಹಲವಾರು ಕಾವ್ಯಗಳ ಕೂಡಿ
ಕಾಲನಾ ಹರಿವಿನಲಿ ಹಲವು
ಕಾವ್ಯಗಳೆಂಬ ಝರಿಗಳನು
ಸೇರುತಲಿ ನದಿಯಾಗಿ ಓಡಿ

ರನ್ನ ಜನ್ನರ ಪೊನ್ನ ಹರಿಹರರ
ಕಾವ್ಯಗಳು ಕನ್ನಡದ
ಸಾಹಿತ್ಯ ನದಿಗೆ ಸೇರುತಿರೆ
ಭಾರತಾಂಬೆಯಖಂಡ ಸಾಹಿತ್ಯ
ಸಾಗರದ ಮಡಿಲನ್ನು
ತಾವೆಂದು ತುಂಬಿ ಹರಿಸುತಿರೆ

ಭಾಷೆ ಹಲವಾರಿರಲು ಭರತ
ಖಂಡದ ತುಂಬ ನೀತಿ
ನಿಯಮಗಳೊಂದು ಹೊಂದಿ ಸೇರದಿರೆ
ಪಾಣಿನಿಯು ಇದಕಂಡು ವ್ಯಾಕರಣ
ರಚಿಸಿರಲು ಏಕತೆಯು
ವಿವಿಧತೆಯ ನಡುವೆ ಮೂಡುತಿರೆ

ಬಾಣಂತಿ ಜ್ವರದಿಂದ ಮಾತೆಯರು
ಅಸುನೀಗಿ ಹಸುಗೂಸುಗಳು
ಆಗೆ ತಬ್ಬಲಿಗಳು
ಇಗ್ನಾಜು ಫಿಲಿಪ ಸಮಲ್ವೈಸ
ಇದಕಂಡು ಮರುಗುತಲಿ
ದುಡಿದು ತಾ ಹಗಲು ಇರುಳು

ಸಂಕಲ್ಪವನು ತೊಟ್ಟು ನಿದ್ರೆ
ಊಟವ ಬಿಟ್ಟು ದುಡಿದಿರಲು
ಜ್ವರಕೆ ತಾ ಕಾರಣವನರಸಿ
ಕೈ ತೊಳೆದು ರೋಗಿಗಳ ಮುಟ್ಟುವುದೆ
ಇದಕೆಂದು ಪರಿಹಾರ
ಎಂಬಂಥ ಬೆಳಕು ಹರಿಸಿ

ಕತೃತ್ವ ಶಕ್ತಿಯದು ಪ್ರತಿಯೊಂದು
ಜೀವಿಯಲು ಅಡಗಿಹುದು
ಕಾಣದೆಯೆ ಸುಪ್ತವಾಗಿ
ಅಂತರಾಗ್ನಿಯ ಕಾವು ಸೋಕಿರಲು
ತಾ ಕರಗಿ ಹರಿಯುವುದು
ಹೊರಗಡೆಗೆ ವ್ಯಕ್ತವಾಗಿ

ನಿನ್ನೊಳಗೆ ಅದಗಿರುವ ಪ್ರತಿಭೆಗಳೆ
ಎಂದೆಂದು ಸಾಧನೆಗೆ
ಬೇಕಿರುವ ಪರಿಕರಗಳು
ಗುರು-ಮಿತ್ರ ತಂದೆ ತಾಯಿಯರು
ಪರಿಸರವು ನಿನ್ನ ಸಾಧನೆಗೆ
ವೇಗ ವರ್ಧಕಗಳು

ಮೈಕೊಡವಿ ಎದ್ದೇಳು ಭಯವನ್ನು
ಕೈಬಿಟ್ಟು ಉದ್ದೀಪಿಸು
ನಿನ್ನ ಅಂತರಾಗ್ನಿಯನ್ನು
ಉರಿವ ಹಣತೆಯ ತೆರದಿ ತೋರು ನೀ
ಬೆಳಕನ್ನು ವ್ಯರ್ಥ ಗೊಳಿಸದೆ
ನಿನ್ನ ಈ ಜೀವನವನು.

ಡಾ.ಸುದರ್ಶನ ಗುರುರಾಜರಾವ್